ಪಾನನಿರೋಧ -
ಮದ್ಯ ತಯಾರಿಕೆ, ವಿಕ್ರಯ, ಅಥವಾ ಸಾಗಾಟವನ್ನು ಕಾನೂನಿನ ಮೂಲಕ ನಿಷೇಧಿಸುವುದನ್ನು ಪಾನನಿರೋಧವೆಂದು ಕರೆಯಲಾಗಿದೆ. ಮದ್ಯಪಾನ ಪುರಾತನಕಾಲದಿಂದ ಅಂಟಿಕೊಂಡು ಬಂದಿರುವ ದುವ್ರ್ಯಸನ. ಅದರಿಂದ ಮನುಷ್ಯನ ಮೇಲೆ ಆಗುವ ನೈತಿಕ ಹಾಗೂ ಬೌದ್ಧಿಕ ಆಘಾತ ಅಪಾರವಾದ್ದು. ಅದರ ಸಾಮಾಜಿಕ ದುಷ್ಪರಿಣಾಮವೂ ಅಪರಿಮಿತವಾದ್ದು. ಆರ್ಥಿಕವಾಗಿ ಅದು ಅನರ್ಥಕಾರಿ. ಆದ್ದರಿಂದಲೇ ಪ್ರಾಚೀನ ಕಾಲದಿಂದಲೂ ಮದ್ಯಪಾನದ ವಿರೋಧವಾಗಿ ಎಲ್ಲಾ ಶಾಸ್ತ್ರಗಳೂ, ಧರ್ಮಗಳೂ, ಸ್ಪಷ್ಟ ನಿಲುವು ತಾಳಿವೆ. ಮದ್ಯಸೇವನೆ ಮನುಷ್ಯನ ಅಧಃಪಥನಕ್ಕೆ ಕಾರಣವಾಗುವುದೆಂದು ಸಾಕ್ರೆಟೀಸಿನಿಂದ ಮಹತ್ಮಾಗಾಂಧಿವರೆಗೆ ಎಲ್ಲಾ ಜಿಜ್ಞಾಸುಗಳು ಸಂತರು, ವಿಚಾರವಂಥರು ಹೇಳಿದ್ದಾರೆ. ಎಲ್ಲ ದೇಶಗಳಲ್ಲೂ ಒಂದಲ್ಲ ಒಂದು ವಿಧದಲ್ಲಿ ಮದ್ಯಪಾನದ ವಿರುದ್ಧ ಸಾಮಾಜಿಕ ಪ್ರತಿಕ್ರಿಯೆ ಇದೆ. ಈ ಅನಿಷ್ಟ ಅಭ್ಯಾಸವನ್ನು ತಪ್ಪಿಸಲು ಅನೇಕ ದೇಶಗಳಲ್ಲಿ ನಿರಂತರವಾಗಿ ಸಾರ್ವಜನಿಕ ಚಳವಳಿ, ಪ್ರಚಾರ ಇತ್ಯಾದಿಗಳನ್ನು ನಡೆಸುತ್ತಲೇ ಇರಲಾಗಿದೆ.

ಮದ್ಯದತಯಾರಿಕೆ, ಮಾರಾಟ ಮತ್ತು ಸೇವನೆಯನ್ನು ನಿರೋಧಿಸಲು ಅಥವಾ ನಿಯಂತ್ರಿಸಲು ಬೇರೆ ದೇಶಗಳಲ್ಲೂ, ಭಾರತದಲ್ಲೂ ಪ್ರಯತ್ನಗಳು ನಡೆದಿವೆ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 1919ರಿಂದ 1933ರ ವರೆಗೆ ಪಾನನಿರೋಧವನ್ನು ವಿಧಿಸಲಾಗಿತ್ತು. ಸ್ಕಾಂಡಿನೇವಿಯ ದೇಶಗಳಲ್ಲಿ ಒಂದಲ್ಲ ಒಂದು ರೀತಿಯ ಪಾನನಿಯಂತ್ರಣ ಕಾನೂನನ್ನು ಜಾರಿಗೆ ತರಲಾಗಿದೆ. ಯುದ್ಧವೇ ಮುಂತಾದ ಜರೂರು ಪರಿಸ್ಥಿತಿ ಒದಗಿದಾಗ ರಕ್ಷಣಾ ಬಲದ ಮನಃ ಸ್ವಾಸ್ಥ್ಯದ ಹಾಗೂ ಬುದ್ಧಿ ಶಕ್ತಿಯ ಶಿಥಿಲತೆಯನ್ನು ತಪ್ಪಿಸಲು ಪಾನನಿರೋಧವನ್ನು ಕಡ್ಡಾಯಮಾಡಿರುವ ಉದಾಹರಣೆಗಳುಂಟು. 

ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲೂ ಜನರಿಗೆ ಹಾಗೂ ಪ್ರಭುತ್ವಕ್ಕೆ ಮದ್ಯಪಾನದ ಅನಿಷ್ಟ ಪರಿಣಾಮಗಳ ಮನವರಿಕೆ ಆಗಿದೆ. ಅದನ್ನು ನಿಷೇಧಿಸುವ ಅಥವಾ ನಿಯಂತ್ರಿಸುವ ಬಗ್ಗೆ ಇರುವ ತಾತ್ವಿಕ ಭಿನ್ನಾಭಿಪ್ರಾಯ ಕಡಿಮೆ. ಆದರೆ ಪಾನನಿರೋಧ ಅಥವಾ ನಿಯಂತ್ರಣವನ್ನು ಕಾನೂನಿನ ಮೂಲಕ ಎಷ್ಟರ ಮಟ್ಟಿಗೆ ತರಲು ಸಾಧ್ಯ ಎಂಬುದರ ಬಗ್ಗೆ ಎಲ್ಲಾ ಕಡೆಯೂ ವಿವಾದವಿದೆ. ಮದ್ಯ ವಸ್ತುಗಳ ಮಾರಾಟದಲ್ಲಿ ಲಾಭಕಂಡಿರುವ ಆಸಕ್ತ ಹಿತಗಳು ವ್ಯವಸ್ಥಿತ ಪ್ರಚಾರ ಮಾಡಿ ಅಸಂಗತ ಕ್ರಮಗಳನ್ನು ಕೈಗೊಂಡು ಪಾನನಿರೋಧ ಕಾನೂನುಗಳನ್ನು ದುರ್ಬಲಗೊಳಿಸಲು ಎಲ್ಲಾ ದೇಶಗಳಲ್ಲೂ ಸತತ ಪ್ರಯತ್ನ ನಡೆಸಿವೆ. ಮದ್ಯದ ಮೇಲಿನ ತೆರಿಗೆಗಳಿಂದ ಬೊಕ್ಕಸವನ್ನು ಭರ್ತಿಮಾಡಿಕೊಳ್ಳುವ ಆಸೆ ಇಟ್ಟುಕೊಂಡಿರುವ ಸರ್ಕಾರಗಳೂ ಕೂಡ ಪಾನನಿರೋಧದ ಬಗ್ಗೆ ಉಪೇಕ್ಷೆ ತಾಳುತ್ತಿವೆ. ಮದ್ಯ ವಸ್ತುಗಳ ಬಿಕರಿದಾರರ ಹಿತಾಸಕ್ತಿ ಹಾಗೂ ಅಬ್ಕಾರಿ ತೆರಿಗೆಯ ಮೇಲೆ ಆಸೆ ಇಟ್ಟಿರುವ ಸರ್ಕಾರದ ಮೇಲೆ ಮನೋಭಾವದಿಂದಾಗಿ ಕಾನೂನುಗಳು ಸರಿಯಾಗಿ ಅನ್ವಯವಾಗದೆ ಕೊನೆಯಲ್ಲಿ ಅವನ್ನೇ ರದ್ದುಮಾಡುವ ಪರಿಸ್ಥಿತಿಯೂ ಏರ್ಪಟ್ಟಿದೆ.

ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಪಾನನಿರೋಧದ ಬಗ್ಗೆ ತೀವ್ರ ಚಳವಳಿ ನಡೆದುಬಂದಿದೆ. ಮಹಾತ್ಮಗಾಂಧಿಯವರು ಪಾನನಿರೋಧಕ್ಕಾಗಿ ಸತತವಾಗಿ ಚಳವಳಿ ನಡೆಸಿದರು. ನಾನೊಂದು ಗಂಟೆ ಅಖಿಲ ಭಾರತದ ಸರ್ವಾಧಿಕಾರಿಯಾದರೆ ನಾನು ಮಾಡುವ ಪ್ರಥಮ ಕಾರ್ಯ ಈ ರೀತಿ ಇದ್ದೀತು: ಯಾವ ಪರಿಹಾರವನ್ನೂ ಕೊಡದೆ ಎಲ್ಲಾ ಪಾನದಂಗಡಿಗಳನ್ನು ನಿಲ್ಲಿಸುತ್ತೇನೆ, ಹೆಂಡ ಕೊಡುವ ತಾಳೆ ವೃಕ್ಷಗಳನ್ನು ನಾಶಮಾಡಿಸುತ್ತೇನೆ. ಎಲ್ಲ ಗಿರಣಿ ಮಾಲೀಕರು ಮತ್ತು  ತಮ್ಮ ಕಾರ್ಮಿಕರಿಗೆ  ಮನೋರಂಜನೆ ಮತ್ತು ವಿನೋದಕ್ಕೆ ಆಶ್ರಯವಾಗುವ ಕೇಂದ್ರಗಳನ್ನು ತೆರೆದು ಅವುಗಳಲ್ಲಿ ಅಪಾಯವಿಲ್ಲದ ಪಾನೀಯಗಳನ್ನು ವಿನೋದಗಳನ್ನು ಏರ್ಪಡಿಸಲು ಒತ್ತಾಯಮಾಡುತ್ತೇನೆ. ಹೀಗೆಂದು ಗಾಂಧೀಜಿಯವರು 1931ರ ಜೂನ್ 25ರ ಯಂಗ್ ಇಂಡಿಯಾದ ಒಂದು ಲೇಖನದಲ್ಲಿ ಬರೆದಿದ್ದರು. ಸ್ವತಂತ್ರ ಭಾರತದಲ್ಲಿ ಪಾನನಿಷೇಧ ಕಡ್ಡಾಯವಾಗಿ ಜಾರಿಗೆ ಬರುವುದರಲ್ಲಿ ಯಾವ ಸಂದೇಹವೂ ಇರಲಿಲ್ಲ. ಅಂತೆಯೇ ಭಾರತದ ಸಂವಿಧಾನ ನಿರ್ಮಾಪಕರು ಪಾನನಿರೋಧವನ್ನು ರಾಜ್ಯಾಂಗದ ನಿರ್ದೇಶಕ ತತ್ವಗಳಲ್ಲಿ ಅಡಕಮಾಡಿದರು. 

ಭಾರತದ ಸಂವಿಧಾನದ ಪ್ರಕಾರ ಅಬ್ಕಾರಿ ತೆರಿಗೆ ಹಾಕುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಸೇರಿದ್ದು. ಹಾಗೆಯೇ ಪಾನನಿರೋಧ ಅಥವಾ ನಿಯಂತ್ರಣದ ಕಾನೂನು ಮಾಡುವುದು ರಾಜ್ಯಸರ್ಕಾರದ ವ್ಯಾಪ್ತಿಗೆ ಒಳಪಟ್ಟಿದೆ. ಸಂಪೂರ್ಣ ಪಾನನಿರೋಧವನ್ನು ಜಾರಿಗೆ ತಂದರೆ ರಾಜ್ಯ ಸರ್ಕಾರ ಅಬ್ಕಾರಿ ತೆರಿಗೆಯ ಆದಾಯವನ್ನು ಕಳೆದುಕೊಳ್ಳುತ್ತದೆ. ಪೂರ್ಣ ಪಾನನಿರೋಧದಿಂದ ತತ್‍ಕ್ಷಣ ಬೊಕ್ಕಸದ ಮೇಲೆ ಆಗುವ ಪ್ರತಿಕೂಲಕರ ಪರಿಣಾಮವನ್ನು ಅರಿತ ರಾಜ್ಯಸರ್ಕಾರಗಳು ಕ್ರಮೇಣ ವಿವಿಧ ಘಟ್ಟಗಳಲ್ಲಿ ಪಾನನಿರೋಧತರುವ ಕಾರ್ಯಕ್ರಮವನ್ನು ಹಾಕಿಕೊಂಡುವು. ಮೊಟ್ಟಮೊದಲಾಗಿ ಹಿಂದಿನ ಮದರಾಸು, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಪೂರ್ಣ ಪಾನನಿರೋಧವನ್ನು ಜಾರಿಗೆ ತಂದುವು. 1966ರ ಹೊತ್ತಿಗೆ ಹಿಂದಿನ ಮೈಸೂರು ರಾಜ್ಯದಲ್ಲೂ ಮುಕ್ಕಾಲುಪಾಲು ಪ್ರದೇಶದಲ್ಲಿ ಪಾನನಿರೋಧ ಜಾರಿಯಲ್ಲಿತ್ತು. ಆ ವೇಳೆಗೆ ಪಾನನಿರೋಧದ ಯಶಸ್ಸಿನ ಬಗ್ಗೆ ಸಂದೇಹ ಅಲ್ಲಲ್ಲಿ ವ್ಯಕ್ತವಾಯಿತು. ಕಾನೂನಿನ ಮೂಲಕವೇ ಪಾನನಿರೋಧ ಯಶಸ್ವಿಯಾಗಲು ಸಾಧ್ಯವಾಗಲಾರದೆಂದು ಕುಡಿಯುವ ಅಭ್ಯಾಸ ಇರುವವರು ಕಳ್ಳಭಟ್ಟಿಯೇ ಮುಂತಾದ ಅಡ್ಡ ಮೂಲಗಳಿಂದ ಮದ್ಯಪಾನೀಯಗಳನ್ನು ಪಡೆಯುತ್ತಲೇ ಇದ್ದಾರೆಂದು ವಾದಯೆದ್ದಿತು. ಪಾನನಿರೋಧದಿಂದ ರಾಜ್ಯಸರ್ಕಾರಗಳು ವೃತಾ ಅದಾಯವನ್ನು ಕಳೆದುಕೊಳ್ಳುತ್ತಿವೆ ಎಂಬ ವಿಚಾರಸರಣಿ ಬೆಳೆಯಿತು. ಈ ಕಾರಣಗಳಿಂದ ಪಾನನಿರೋಧದ ಬಗ್ಗೆ ರಾಜ್ಯಸರ್ಕಾರಗಳ ಪ್ರಮುಖರ ಶ್ರದ್ಧೆ ಶಿಥಿಲವಾಯಿತು. ಮಹಾರಾಷ್ಟ್ರ ಸರ್ಕಾರ ಪಾನನಿರೋಧದ ಕಾನೂನನ್ನು ಸಡಿಲಗೊಳಿಸಿತು. ಮೈಸೂರು ರಾಜ್ಯಸರ್ಕಾರವೂ ಬಹಳಮಟ್ಟಿಗೆ ಪಾನನಿರೋಧದ ಕಾನೂನನ್ನು ಸಡಿಲಪಡಿಸಿ ಸುಲಭವಾಗಿ ಹೆಂಡ ಮತ್ತು ಇತರ ಮದ್ಯ ಪಾನೀಯಗಳ ಬಿಕರಿಯಾಗುವಂತೆ ಮಾಡಿತು. ಇತರ ರಾಜ್ಯಗಳಲ್ಲಿ ಪಾನನಿರೋಧದ ಜಾರಿ ಹಿಂದೆ ಬಿತ್ತು. 1969ರಲ್ಲಿ ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಲ್ಲಿ ಮಾತ್ರ ಸಂಪೂರ್ಣ ಪಾನನಿರೋಧ ಜಾರಿಯಲ್ಲಿತ್ತು. ಈಗ ಮತ್ತೊಮ್ಮೆ ಕೇಂದ್ರಸರ್ಕಾರ ಸಂಪೂರ್ಣ ಪಾನನಿರೋಧದಲ್ಲಿ ಆಸಕ್ತಿ ತಳೆದಿದೆ. ಅದಕ್ಕಾಗಿ ಕಾಲಬದ್ಧ ಕಾರ್ಯಕ್ರಮವೊಂದನ್ನು ಹಾಕಿಕೊಳ್ಳುವ ನಿರ್ಧಾರ ಮಾಡಿದೆ; ರಾಜ್ಯಸರ್ಕಾರಗಳು ಈ ನೀತಿಯನ್ನು ಅನುಷ್ಠಾನಕ್ಕೆ ತರಬೇಕಾಗಿದೆ. 

ಪಾನನಿರೋಧ ಕಾನೂನಿನ ಜಾರಿಯಲ್ಲಿ ಇರುವ ತೊಡಕು, ಕಳ್ಳಭಟ್ಟಿ, ಉದ್ಯಮದ ಬೆಳೆವಣಿಗೆ ಹಾಗೂ ಅಬ್ಕಾರಿ ಸುಂಕದ ಮೇಲಿನ ಆಸೆ-ಈ ಕಾರಣಗಳನ್ನು ಮುಂದೊಡ್ಡಿ ಸಂಪೂರ್ಣ ಪಾನನಿರೋಧವನ್ನು ಕೈಬಿಡುವ ಯೋಚನೆ ಮಾಡಲಾಗಿತ್ತು. ಸಾಮಾಜಿಕ ಹಿತವನ್ನು ಸಮೀಚೀನ ದೃಷ್ಟಿಯಿಂದ ನೋಡುತ್ತಿಲ್ಲವೆಂಬುದಕ್ಕೆ ನಿದರ್ಶನವಿದು, ಎಂದು ವಾದಿಸಲಾಗಿದೆ.

ಮದ್ಯಪಾನದ ಅಭ್ಯಾಸವಿರುವ ಜನರ ಕೌಟುಂಬಿಕ ಅಯವ್ಯಯದಲ್ಲಿ ಗಣನೀಯವಾದ ಪಾಲು ಪಾನಕ್ಕಾಗಿ ವ್ಯಯವಾದರೆ, ಕುಟುಂಬದ ಆರ್ಥಿಕ ಸ್ಥಿತಿ ತುಂಬ ಕೀಳಾಗುತ್ತದೆ. ಕುಟುಂಬದವರ ಆಹಾರ, ಬಟ್ಟೆ ಮತ್ತಿತರ ಅವಶ್ಯಕತೆಗಳ ಪೂರೈಕೆ ಆಗದೆ ಜೀವನಮಟ್ಟ ಕುಸಿಯುತ್ತದೆ. ಮದ್ಯಪಾನದ ಅಭ್ಯಾಸ ಅಲ್ಪಾದಾಯದ ಶ್ರಮಿಕ ವರ್ಗಕ್ಕೂ ಇತರ ಹಿಂದುಳಿದ ವರ್ಗಗಳ ಜನರಿಗೂ ಆರ್ಥಿಕ ಶಾಪವಾಗಿ ಪರಿಣಮಿಸುತ್ತದೆ. ಭಾರತದ ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ 21,197 ಕಾರ್ಮಿಕ ಕುಟುಂಬಗಳ ಆಯವ್ಯಯದ ಸಮೀಕ್ಷೆಯೊಂದನ್ನು 1958-59ಕ್ಕೆ ಸಂಬಂಧಿಸಿದಂತೆ ನಡೆಸಿತು. ದೇಶದ ಐವತ್ತು ಕೇಂದ್ರಗಳಲ್ಲಿ ಕಾರ್ಖಾನೆ, ಪ್ಲಾಂಟೇಶನ್ ಹಾಗೂ ಗಣಿ ಕೆಲಸಗಾರರ ಕೌಟುಂಬಿಕ ಆಯವ್ಯಯವನ್ನು ಅಧ್ಯಯನ ಮಾಡಲಾಯಿತು. ಈ ಅಧ್ಯಯನದ ಪ್ರಕಾರ ಸೇ.15ರಷ್ಟು ಕುಟುಂಬಗಳು ಮದ್ಯಪಾನದ ಅಭ್ಯಾಸಕ್ಕೆ ತುತ್ತಾಗಿದ್ದುವು. ಕಾರ್ಖಾನೆ ಕಾರ್ಮಿಕರಿಗಿಂತ ಪ್ಲಾಂಟೇಷನ್ ಹಾಗೂ ಗಣಿ ಕೆಲಸಗಾರರಲ್ಲಿ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆಯೆಂದು ತಿಳಿದುಬಂತು. ಕುಡಿತದ ಅಭ್ಯಾಸವಿರುವ ಪ್ಲಾಂಟೇಷನ್ ಕಾರ್ಮಿಕರ ಕೌಟುಂಬಿಕ ವೆಚ್ಚದಲ್ಲಿ ಸೇ.16.5 ಗಣಿಕಾರ್ಮಿಕರ ವೆಚ್ಚದಲ್ಲಿ ಸೇ.10.46 ಮತ್ತು ಕಾರ್ಖಾನೆ ಕೆಲಸಗಾರರ ಖರ್ಚಿನಲ್ಲಿ ಸೇ.7.61 ಕುಡಿತಕ್ಕಾಗಿ ವಿನಿಯೋಗವಾಯಿತೆಂದು ಕಂಡುಬಂದಿತು. ಇದು ಸರಾಸರಿ ವೆಚ್ಚ. ಆದರೆ ಅನೇಕ ಕಾರ್ಮಿಕ ಕುಟುಂಬಗಳ ತಿಂಗಳ ಖರ್ಚಿನಲ್ಲಿ ಸೇಕಡ 25ಕ್ಕೂ ಹೆಚ್ಚು ಭಾಗ ಮದ್ಯದ ಖರೀದಿಗೆ ಖರ್ಚಾಗಿರುವುದುಂಟು.

ಕೇಂದ್ರಕಾರ್ಮಿಕ ಇಲಾಖೆ ನಡೆಸಿದ ಈ ಸಮೀಕ್ಷೆಗೆ ಒಳಪಟ್ಟ ಕೌಟುಂಬಿಕ ಆಯವ್ಯಯಗಳನ್ನು ಕೇಂದ್ರಸರ್ಕಾರ ರಚಿಸಿದ್ದ ಒಂದು ಸಮಿತಿಯ (ತೇಕ್‍ಚಂದ್ ಸಮಿತಿ) ಅಧ್ಯಯನ ತಂಡ ಪೃಥಕ್ಕರಣ ಮಾಡಿತು. ಈ ಅಧ್ಯಯನದ ಪ್ರಕಾರ, ಕುಡಿತದ ಅಭ್ಯಾಸವಿರುವ ಕಾರ್ಮಿಕರ ವರಮಾನ ಹೆಚ್ಚಿದಂತೆಲ್ಲ ಮದ್ಯಪಾನೀಯಗಳಿಗೆ ಅವರ ಬೇಡಿಕೆ ಹೆಚ್ಚುತ್ತದೆ. ವರಮಾನ ಏರಿದಂತೆಲ್ಲ ಅವರ ಹೆಚ್ಚು ವರಮಾನದ ಬಹುಭಾಗ ಕುಡಿತಕ್ಕೆ ವಿನಿಯೋಗವಾಗುತ್ತದೆ. ಜೀವನಮಟ್ಟ ಏರುವುದಿಲ್ಲ. ಉತ್ಪಾದನೆಯ ಸಾಮಥ್ರ್ಯ ಇಳಿಯುತ್ತದೆ.

ತೇಕ್‍ಚಂದ್ ಸಮಿತಿಯ ಅಂದಾಜಿನ ಪ್ರಕಾರ, ಪಾನನಿಷೇಧ ಇಲ್ಲದಿರುವ ರಾಜ್ಯಗಳಲ್ಲಿ ಜನರು ಮದ್ಯಪಾನಕ್ಕಾಗಿ ಮಾಡುವ ಖರ್ಚು ಸುಮಾರು ರೂ.94 ಕೋಟಿ, ಪಾನಪ್ರತಿಬಂಧ ಇರುವ ಕಡೆ ಕಳ್ಳಭಟ್ಟಿಯ ಪಾನೀಯಗಳ ಮೇಲೆ ಮಾಡುವ ಖರ್ಚು ಸುಮಾರು ರೂ. 43 ಕೋಟಿ. ಅಂದರೆ ಭಾರತದಲ್ಲಿ ಕುಡಿತದ ಮೇಲೆ ಖರ್ಚಾಗುತ್ತಿರುವ ಒಟ್ಟು ಹಣ (ತೇಕ್‍ಚಂದ್ ಸಮಿತಿಯ ಆಗಿನ ಅಂದಾಜಿನಂತೆ) ವರ್ಷಕ್ಕೆ ಸುಮಾರು ರೂ.146 ಕೋಟಿ. ದೇಶಾದ್ಯಂತ ಸಂಪೂರ್ಣ ಪಾನನಿರೋಧವನ್ನು ಜಾರಿಗೆ ತಂದರೆ ಇಷ್ಟು ಹಣ ಜನರಿಗೆ ಉಳಿತಾಯವಾಗುತ್ತದೆ. ಇದನ್ನು ಒಳ್ಳೆಯ ಆಹಾರ, ಬೆಚ್ಚನೆಯ ಬಟ್ಟೆ, ವಸತಿ, ಮಕ್ಕಳ ವಿದ್ಯಾಭ್ಯಾಸ ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ವಿನಿಯೋಗಿಸಿದರೆ ಈ ಜನರ ಜೀವನ ಮಟ್ಟ ಏರುತ್ತದೆ. ಶ್ರಮದ ಸಾಮಥ್ರ್ಯ ಉತ್ತಮವಾಗುತ್ತದೆ.

ಪಾನನಿರೋಧ ಕಾರ್ಯಕ್ರಮದಿಂದ ರಾಜ್ಯ ಸರ್ಕಾರಗಳಿಗೆ ಅಬ್ಕಾರಿ ತೆರಿಗೆಗಳ ಆದಾಯ ನಿಂತುಹೋಗುವುದು ಸಹಜ. 1963-64ರಲ್ಲಿ ಪಾನನಿರೋಧ ಸಂಪೂರ್ಣ ಹಾಗೂ ಭಾಗಶಃ ಜಾರಿಯಲ್ಲಿದ್ದ ರಾಜ್ಯಗಳಲ್ಲಿ ಸರ್ಕಾರಗಳಿಗೆ ಸುಮಾರು ರೂ.40 ಕೋಟಿಯಷ್ಟು ನಷ್ಟವಾಯಿತೆಂದು ಅಂದಾಜು ಮಾಡಲಾಗಿದೆ. ಇದರ ಜೊತೆಗೆ ಪಾನನಿರೋಧದ ಕಾನೂನನ್ನು ಜಾರಿಗೆ ತರಲು ಸಿಬ್ಬಂದಿ ಖರ್ಚು ಸುಮಾರು ರೂ.5-6ಕೋಟಿ ಎಂದು ಲೆಕ್ಕ ಹಾಕಲಾಗಿದೆ. ಅಂದರೆ ಪಾನನಿರೋಧದಿಂದ ಸರ್ಕಾರಗಳು ಒಟ್ಟು ಕಳೆದುಕೊಂಡಿದ್ದು ಸುಮಾರು ರೂ.46 ಕೋಟಿ. ಇನ್ನು ಎಲ್ಲ ರಾಜ್ಯಗಳಲ್ಲೂ ಸಂಪೂರ್ಣವಾಗಿ ಪಾನನಿರೋಧ ಕಡ್ಡಾಯವಾಗಿ ಜಾರಿಗೆ ಬಂದರೆ ರಾಜ್ಯ ಸರ್ಕಾರಗಳ ಆದಾಯದಲ್ಲಿ ಕಡಿಮೆಯಾಗುವ ಮೊಬಲಗು ಸುಮಾರು ರೂ.65 ಕೋಟಿ ಎಂದು ಅಂದಾಜು ಮಾಡಲಾಗಿದೆ.

ಮದ್ಯದ ಮೇಲಿನ ತೆರಿಗೆಯಿಂದ ಬೊಕ್ಕಸಕ್ಕೆ ಹಣ ತುಂಬಿಸಲು ಇಚ್ಛೆಪಡುವವರು ಪಾನನಿರೋಧದಿಂದ ಆದಾಯದ ನಷ್ಟವಾಗುವುದೆಂದು ವಾದಿಸುವರಾದರೂ, ಮದ್ಯಪಾನದ ಸಾಮಾಜಿಕ ವೆಚ್ಚದ ಲೆಕ್ಕ ಹಾಕುವುದಿಲ್ಲ. ಅಬ್ಕಾರಿ ತೆರಿಗೆ ಅತಿಭಾರದ ತೆರಿಗೆ. ಮದ್ಯದ ಬೆಲೆಯಲ್ಲಿ ಸೇ50 ರಿಂದ 60ರ ವರೆಗೆ ತೆರಿಗೆಯ ಅಂಶವಿರುತ್ತದೆ. ಕುಡಿಯುವವನು ಮತ್ತಿನಲ್ಲಿದ್ದಾಗ, ಪ್ರಜ್ಞೆಯ ಹತೋಟಿ ಕಳೆದುಕೊಂಡಿರುವಾಗ ಕುಡಿಕುಡಿದು ಕೊಡುವ ತೆರಿಗೆಯ ಹಣ ಇದು. ಇದು ಅನ್ಯಾಯವಾದ್ದು. ಲಕ್ಷಾಂತರ ಜನರ ಆರ್ಥಿಕ ಹಾಗೂ ಸಾಮಾಜಿಕ ವಿನಾಶಕ್ಕೆ ಕಾರಣವಾದ ಪಾನದ ಹಣದಿಂದ ಬೊಕ್ಕಸ ತುಂಬಿಸುತ್ತೇವೆಂಬ ಮಾತು ಕಲ್ಯಾಣ ರಾಷ್ಟ್ರದ ಕಲ್ಪನೆಗೆ ವಿರುದ್ಧವಾದದ್ದು. ದೂರದೃಷ್ಟಿಯಿಂದ ನೋಡಿದರೆ ಪಾನನಿರೋಧದಿಂದ ಸರ್ಕಾರ ತತ್ ಕ್ಷಣದಲ್ಲಿ ಕಳೆದುಕೊಳ್ಳುವ ಆದಾಯ ಕ್ರಮೇಣ ಬೇರೆ ಬಾಬುಗಳಿಂದ ಅದಕ್ಕೆ ಪರೋಕ್ಷವಾಗಿ ಸಂದಾಯವಾಗುತ್ತದೆ. ಪಾನದ ಖರ್ಚು ತಪ್ಪಿದರೆ ಅದಕ್ಕಾಗಿ ವ್ಯಯವಾಗುತ್ತಿದ್ದ ಹಣವನ್ನು ಜನರು ಪುಷ್ಟಿಯುತವಾದ ಆಹಾರಕ್ಕಾಗಿ, ಮತ್ತಷ್ಟು ಬಟ್ಟೆಬರೆಗಾಗಿ, ಮನೋರಂಜನೆಗಾಗಿ ವಿನಿಯೋಗಿಸುತ್ತಾರೆ. ಈ ಬಾಬುಗಳಿಗೆ ಜನರು ಹೆಚ್ಚು ಹಣ ಖರ್ಚುಮಾಡಿದಾಗ ಮಾರಾಟ ತೆರಿಗೆ, ಮನೋರಂಜನೆ ತೆರಿಗೆ, ಮತ್ತು ವಸ್ತುಗಳ ಮೇಲಿನ ಉತ್ಪಾದನ ಸುಂಕಗಳ ಮೂಲಕ ಸರ್ಕಾರಕ್ಕೆ ಹೆಚ್ಚು ಆದಾಯ ಬಂದೇ ಬರುತ್ತದೆ. ಕುಡಿತ ಬಿಟ್ಟ ಜನರ ಜೀವನಮಟ್ಟ ಹೆಚ್ಚಿ ಅವರ ಕೌಟುಂಬಿಕ ಜೀವನ ಹಸನಾಗುತ್ತದೆ.

ಪಾನನಿರೋಧ ಜಾರಿಯಾದ ಕಡೆ ಕಳ್ಳಭಟ್ಟಿ, ಲಂಚರುಷವತ್ತು ಮುಂತಾದ ಸಮಸ್ಯೆಗಳು ಉದ್ಭವವಾಗುತ್ತವೆ ಎಂದು ಮಾತಿದೆ. ಆದರೆ ಪಾನನಿರೋಧದಲ್ಲಿ ಹಾಗೂ ಜನರ ಅಭ್ಯುದಯದಲ್ಲಿ ನಂಬಿಕೆಯುಳ್ಳ ಪ್ರಾಮಾಣಿಕ ಅಧಿಕಾರಿಗಳ ಹಾಗೂ ದಕ್ಷ ಸಿಬ್ಬಂದಿಯ ವ್ಯವಸ್ಥೆಯಿಂದ ಪಾನನಿರೋಧವನ್ನು ಯಶಸ್ವಿಯಾಗಿ ಮಾಡುವುದು ಸಾಧ್ಯವಿದೆಯೆಂದು ವಾದಿಸಬಹುದು. ಸತತವಾದ ಸಾಮಾಜಿಕ ಶಿಕ್ಷಣ ಹಾಗೂ ಕಾನೂನಿನ ದಕ್ಷ ಅನ್ವಯದಿಂದ ಪಾನ ನಿರೋಧದಲ್ಲಿ ಬಹುಮಟ್ಟಿಗೆ ಯಶಸ್ಸು ದೊರಕುತ್ತದೆ. ಕುಡಿತದ ದುವ್ರ್ಯಸನಕ್ಕೊಳಗಾದ ಕುಟುಂಬಗಳ ಆರ್ಥಿಕ ಹಾಗೂ ಸಾಮಾಜಿಕ ಕಲ್ಯಾಣವನ್ನು ಸಾಧಿಸಬಹುದು.
 (ಬಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ